Take a fresh look at your lifestyle.

ನಕಲಿ ಕಾರ್ಮಿಕ ಕಾರ್ಡ್ ದುರುಪಯೋಗದ ತನಿಖೆಗೆ ಕೆ.ಎಸ್. ವೆಂಕಟಸುಬ್ಬಯ್ಯ ಆಗ್ರಹ

ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಉದ್ಯೋಗವಿಲ್ಲದ ನೈಜ ಫಲಾನುಭವಿಗಳಿಗೆ ಆಹಾರ ಕಿಟ್ ನೀಡದೆ ಕೇವಲ ನಕಲಿ ಕಾರ್ಮಿಕರಿಗೆ ನೀಡಿದ್ದು, ಈ ಬಗ್ಗೆ ತನಿಖೆ ನಡೆಸಬೇಕು

0
post ad

ಕುಣಿಗಲ್ : ನಕಲಿ ಕಾರ್ಮಿಕ ಕಾರ್ಡ್‌ಗಳ ನಿಯಂತ್ರಿಸಿ ನೈಜ ಕಾರ್ಮಿಕರನ್ನು ನೊಂದಾಯಿಸಿ ಇಲಾಖೆಯ ಸೌಲಭ್ಯಗಳು ಸಮರ್ಪಕವಾಗಿ ಲಭ್ಯವಾಗಬೇಕೆಂದು ಕರ್ನಾಟಕ ಕಾರ್ಮಿಕ ಸೇನೆಯ ರಾಜ್ಯಾಧ್ಯಕ್ಷ ಕೆ.ಎಸ್. ವೆಂಕಟಸುಬ್ಬಯ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ನಕಲಿ ಕಾರ್ಮಿಕ ಕಾರ್ಡ್ ಮತ್ತು ಸೌಲಭ್ಯಗಳ ದುರಪಯೋಗವನ್ನು ತಡೆಯುವಂತೆ ಒತ್ತಾಯಿಸಿ ತಾಲ್ಲೂಕು ಕಚೇರಿ ಮುಂದೆ ಕರ್ನಾಟಕ ಕಾರ್ಮಿಕ ಸೇನೆಯು ಪ್ರತಿಭಟನೆ ನಡೆಸಿತು‌.
ಕಾರ್ಮಿಕ ಇಲಾಖೆಯಲ್ಲಿ ಕಳೆದ ಆರು ತಿಂಗಳಿಂದ ಯಾವುದೇ ಕಾರ್ಮಿಕರನ್ನು ನೋಂದಾಯಿಸಿಕೊಳ್ಳಲು ಸೇವಾ ಸಿಂಧು ಕೇಂದ್ರವು ಇಲ್ಲ. ಕೂಡಲೇ ಕಾರ್ಮಿಕ ಸೇವಾ ಕೇಂದ್ರವನ್ನು ಕಾರ್ಮಿಕ ಇಲಾಖೆ ಆರಂಭಿಸಬೇಕು ಎಂದರು. ನಕಲಿ ಕಾರ್ಡ್‌ದಾರರನ್ನು ಪತ್ತೆಹಚ್ಚಿ ವಜಾಗೊಳಿಸಬೇಕು. ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಉದ್ಯೋಗವಿಲ್ಲದ ನೈಜ ಫಲಾನುಭವಿಗಳಿಗೆ ಆಹಾರ ಕಿಟ್ ನೀಡದೆ ಕೇವಲ ನಕಲಿ ಕಾರ್ಮಿಕರಿಗೆ ನೀಡಿದ್ದು, ಈ ಬಗ್ಗೆ ತನಿಖೆ ನಡೆಸಬೇಕು. ತಾಲ್ಲೂಕು ಕೇಂದ್ರದ ಕಾರ್ಮಿಕ ಕಚೇರಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ನೌಕರ ಪರ್ವತರಾಜ ಹಲವಾರು ತಿಂಗಳಿಂದ ಕೆಲಸಕ್ಕೆ ಗೈರು ಹಾಜರಾಗಿದ್ದು, ಈತನಿಗೆ ಸಂಬಳ ನೀಡುತ್ತಿರುವ ಬಗ್ಗೆ ತನಿಖೆ ಮಾಡಬೇಕು ಎಂದು ಆಗ್ರಹಿಸಿದರು.
ಅಮೃತೂರು, ಮಡಿಕೆಹಳ್ಳಿ, ಬೇಗೂರು ಪಂಚಾಯ್ತಿಗಳಿಗೆ ಕಾರ್ಮಿಕ ಬಂಧುಗಳು ಹೆಚ್ಚು ಕಮಿಷನ್ ಆಸೆಗೆ ಕಾರ್ಮಿಕರನ್ನು ನೊಂದಾಯಿಸುತ್ತಿರುವ ವಿರುದ್ಧ ಕ್ರಮ ಜರುಗಿಸಬೇಕು. ಕಾರ್ಮಿಕರಿಗೆ ವೃದ್ಧಾಪ್ಯ ವೇತನವನ್ನು ಎರಡು ಸಾವಿರ ರೂ.ಗಳಿಗೆ ಹೆಚ್ಚಿಸುವುದರ ಜತೆಯಲ್ಲಿ ಗೃಹ ನಿರ್ಮಾಣಕ್ಕೆ ಎರಡು ಲಕ್ಷದಿಂದ ನಾಲ್ಕು ಲಕ್ಷ ರೂಪಾಯಿಗಳಿಗೆ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ತಾಲ್ಲೂಕು ಅಧ್ಯಕ್ಷ ಗಂಗಾಧರ್, ಪ್ರಧಾನ ಕಾರ್ಯದರ್ಶಿ ಶಿವರಾಜು, ಡಿ.ಎಲ್. ಕುಮಾರ್, ಜಯಲಕ್ಷ್ಮಿ, ಈರಣ್ಣ, ನಾಗರಾಜು, ವಿಜಯಕುಮಾರ್ ಮತ್ತಿತರರು ಭಾಗವಹಿಸಿ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.