ಸಾರಿಗೆ ನೌಕರರ ವೇತನ ಬಿಡುಗಡೆ ಮಾಡಿದ ಸರ್ಕಾರ
ಸರ್ಕಾರ ಬಾಕಿ ಉಳಿಸಿಕೊಂಡಿದ್ದ ಆಗಸ್ಟ್ ಮತ್ತು ಚಾಲ್ತಿಯಲ್ಲಿರುವ ಸೆಪ್ಟೆಂಬರ್ ತಿಂಗಳು ವೇತನವನ್ನು ಬಿಡುಗಡೆ ಮಾಡಿದೆ


ಬೆಂಗಳೂರು: ಕೊರೊನಾ ವೈರಸ್ ಸೋಂಕಿನಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಸಾರಿಗೆ ಸಂಸ್ಥೆಗಳಿಗೆ ಆಸರೆಯಾಗಿರುವ ರಾಜ್ಯ ಸರ್ಕಾರ ಅಧಿಕಾರಿ, ಸಿಬ್ಬಂದಿಗಳಿಗೆ ಎರಡು ತಿಂಗಳ ವೇತನವನ್ನು ಬಿಡುಗಡೆ ಮಾಡಿದೆ.
ರಾಜ್ಯಾದ್ಯಂತ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಸಾರಿಗೆ ಸಂಸ್ಥೆಗಳು ಪೂರ್ಣ ಪ್ರಮಾಣದಲ್ಲಿ ಬಸ್ಗಳನ್ನು ಕಾರ್ಯಾಚರಣೆಗೊಳಿಸಲು ಸಾಧ್ಯವಾಗದೆ ಕೇವಲ ಶೇ. 25 ರಷ್ಟು ಮಾತ್ರ ಕಾರ್ಯ ನಿರ್ವಹಿಸುತ್ತಿವೆ. ಈಗಾಗಲೇ ನಷ್ಟದಲ್ಲಿರುವ ಸಾರಿಗೆ ನಿಗಮಗಳು ಮತ್ತಷ್ಟು ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ. ಆದರೂ ಸರ್ಕಾರ ಬಾಕಿ ಉಳಿಸಿಕೊಂಡಿದ್ದ ಆಗಸ್ಟ್ ಮತ್ತು ಚಾಲ್ತಿಯಲ್ಲಿರುವ ಸೆಪ್ಟೆಂಬರ್ ತಿಂಗಳು ವೇತನವನ್ನು ಬಿಡುಗಡೆ ಮಾಡಿದೆ.
ಈ ಹಿಂದೆ, ಸರ್ಕಾರ ಜೂನ್ ಮತ್ತು ಜುಲೈ ತಿಂಗಳ ಸಂಬಳದ 426 ಕೋಟಿ ರೂ.ಗಳನ್ನು ಬಿಡುಗಡೆಗೊಳಿಸಿತ್ತು. ಅಲ್ಲದೆ, ಸೆಪ್ಟೆಂಬರ್ವರೆಗೆ ಸರ್ಕಾರವೇ ವೇತನ ಭರಿಸಲು ತೀರ್ಮಾನಿಸಿತ್ತು. ಇದರಿಂದ ಕೆಎಸ್ ಆರ್ ಟಿಸಿ, ಬಿಎಂಟಿಸಿ, ವಾಯುವ್ಯ ಮತ್ತು ಈಶಾನ್ಯ ಸಾರಿಗೆ ಸಂಸ್ಥೆಗಳ 1.30 ಲಕ್ಷ ನೌಕರರು ನಿರಾಳರಾಗುವಂತಾಗಿದೆ. ಅದಕ್ಕೂ ಮೊದಲು ಸರ್ಕಾರವೇ ಏಪ್ರಿಲ್ ಮತ್ತು ಮೇ ತಿಂಗಳ ವೇತನವನ್ನು ಸಹ ಪಾವತಿ ಮಾಡಿತ್ತು.