Take a fresh look at your lifestyle.

ಟಿಕೆಎಂ ಕಂಪೆನಿಯಲ್ಲಿ ಸರ್ಕಾರದ ನಿಷೇಧವನ್ನು ಯಾರು ಪಾಲಿಸುತ್ತಿಲ್ಲ..!

ಕಾರ್ಮಿಕರು ಕೆಲಸಕ್ಕೆ ಗೈರು ಎನ್ನುತ್ತಿರುವ ಆಡಳಿತ ವರ್ಗ, ಒಳಗೆ ಸೇರಿಸಿಕೊಳ್ಳುತ್ತಿಲ್ಲವೆನ್ನುತ್ತಿರುವ ಕಾರ್ಮಿಕರು... ಏನು ನಡೆಯುತ್ತಿದೆ ಟೊಯೋಟಾ ಕಿರ್ಲೋಸ್ಕರ್ ಮೋಟರ್ಸ್ ಸಂಸ್ಥೆಯಲ್ಲಿ... ಇದರ ಬಗೆಗೆ ಕಾರ್ಮಿಕ ಇಲಾಖೆಗೆ ಮಾಹಿತಿ ಇಲ್ಲವೇ. ಕಾರ್ಮಿಕರು ಸಾಮಾಜಿಕ ಮಾಧ್ಯಮಗಳಲ್ಲಿ ರಾಜ್ಯದ ಗಮನ ಸೆಳೆಯುತ್ತಿದ್ದರೂ ಕಾರ್ಮಿಕ ಅಧಿಕಾರಿಗಳಿಗೆ ಸಂವಹನ ಕೊರತೆಯ ಬಿಕ್ಕಟ್ಟಿನ ಮಾಹಿತಿಯ ಕೊರತೆ ಇದೆಯಾ ?

0
post ad

ರಾಮನಗರ/ಬೆಂಗಳೂರು : ಬಿಡದಿ ಕೈಗಾರಿಕಾ ಪ್ರದೇಶದಲ್ಲಿರುವ ಟಿಕೆಎಂ ಫ್ಯಾಕ್ಟರಿಯಲ್ಲಿ ಆಡಳಿತ ಮಂಡಳಿಯ ತಾತ್ಕಾಲಿಕ ಲಾಕೌಟ್ ಮತ್ತು ಕಾರ್ಮಿಕರ ಪ್ರತಿಭಟನೆಯ ಬಿಕ್ಕಟ್ಟು ತಲೆದೋರಿದ ಹಲವು ದಿನಗಳ ನಂತರ ಕಾರ್ಮಿಕ ಇಲಾಖೆ ಲಾಕ್ ಔಟ್ ಮತ್ತು ಪ್ರತಿಭಟನೆಗಳೆರಡನ್ನು ನಿಷೇಧಿಸಿ ಆದೇಶ ಹೊರಡಿಸಿತ್ತು.

ಆದರೆ, ಸಂವಹನದ ಕೊರತೆಯೋ ಅಥವಾ ಇನ್ಯಾವುದೋ ಕಾರಣವೋ ಗೊತ್ತಿಲ್ಲ… ಕಾರ್ಮಿಕರು ಕರ್ತವ್ಯಕ್ಕೆ ಹಾಜರಾಗಲು ಕಂಪೆನಿ ಮುಖ್ಯದ್ವಾರದಲ್ಲಿ ಸಾಲುಗಟ್ಟಿ ನಿಂತಿದ್ದಾರೆ. ಅತ್ತ, ಆಡಳಿತ ವರ್ಗ ನಾನಾ ಕಾರಣಗಳನ್ನು ನೀಡುತ್ತಾ, ನಾಲ್ಕು ದಿನಗಳಿಂದ ಕಾರ್ಮಿಕರನ್ನು ಒಳಗೆ ಬಿಟ್ಟುಕೊಳ್ಳುತ್ತಿಲ್ಲ.

ನಾಲ್ಕು ದಿನಗಳಿಂದ ಕಾರ್ಮಿಕರು ತಮ್ಮ ಅಳಲು ತೋಡಿಕೊಳ್ಳುತ್ತಾ ಮಾಧ್ಯಮಗಳ ಮೂಲಕ ರಾಜ್ಯದ ಜನತೆಯ ಗಮನ ಸೆಳೆಯುತ್ತಿದ್ದಾರೆ. ಆದರೆ ಕಾರ್ಮಿಕ ಇಲಾಖೆ ಮಾತ್ರ ನಿಷೇಧದ ಆದೇಶ ಹೊರಡಿಸಿ ಕೈಕಟ್ಟಿ ಕುಳಿತಿದೆ. ಕಾರ್ಖಾನೆಯಲ್ಲಿ ನಡೆದಿರುವ ಇಂದಿನ ಬೆಳವಣಿಗೆಯ ಭಾಗವಾಗಿ ಆಡಳಿತ ವರ್ಗ ಒಂದು ನೋಟೀಸ್ ಅನ್ನು ಪ್ರಕಟಿಸಿದೆ. ಎರಡನೇ ಪಾಳಿಗೆ ನೌಕರರು ಹಾಜರಾಗದ ಕಾರಣ ಸೆಕೆಂಡ್ ಶಿಪ್ಟ್ ನ ಆಪರೇಷನ್ ಅನ್ನು ಸ್ಥಗಿತಗೊಳಿಸಲಾಗುತ್ತಿದೆ ಎಂಬುದು ನೋಟೀಸ್ ನ ಸಾರಾಂಶ. ಹಾಗದರೆ ಎರಡನೇ ಪಾಳಯಕ್ಕೆ ಹಾಜರಾಗಲು ಸರತಿ ಸಾಲಿನಲ್ಲಿ ನಿಂತಿರುವ ಕಾರ್ಮಿಕರ ಚಿತ್ರಣ ಯಾವುದಕ್ಕೆ ಸಾಕ್ಷಿ ಎಂಬುದು ಯಕ್ಷ ಪ್ರಶ್ನೆಯಾಗಿದೆ.
ಟೊಯೋಟಾ ಕಿರ್ಲೋಸ್ಕರ್ ಮೋಟರ್ಸ್ ಕಂಪೆನಿಯ ಆಡಳಿತ ಮಂಡಳಿ ಮತ್ತು ಕಾರ್ಮಿಕರ ನಡುವೆ ಮರು ಬಿಕ್ಕಟ್ಟು ಸೃಷ್ಟಿಯಾಗಿದ್ದು ಕಾರ್ಮಿಕ ಅಧಿಕಾರಿಗಳು ವಾಸ್ತವ ತಿಳಿಯಲು ಸ್ಥಳಕ್ಕೆ ಬೇಟಿ ನೀಡಿದ್ದರೆ ಬಿಕ್ಕಟ್ಟು ಸುಖಾಂತ್ಯವಾಗುತ್ತಿತ್ತು ಎಂದು ಟಿಯುಸಿಸಿ ಅಧ್ಯಕ್ಷ ಜಿಆರ್ ಶಿವಶಂಕರ್ ಆರೋಪಿಸಿದ್ದಾರೆ.

ಈ ಬಗೆಗೆ ನೇರವಾಗಿ ಕಾರ್ಮಿಕ ಇಲಾಖೆಯ ಅಧಿಕಾರಿಗಳನ್ನು ಹೊಣೆ ಮಾಡಿದ ಶಿವಶಂಕರ್ ಸರ್ಕಾರದ ನಿಷೇಧ ಆದೇಶವನ್ನು ಹೊರಡಿಸಿದರೆ ಸಾಲದು, ಅದು ಅನುಷ್ಠಾನಕ್ಕೆ ಬಂದಿದೆಯಾ ಎಂಬುದನ್ನು ಖಚಿತಪಡಿಸಿಕೊಳ್ಳಲು ಅಧಿಕಾರಿಗಳು ಸ್ಥಳಕ್ಕೆ ಬೇಟಿ ನೀಡಿ, ಸಂವಹನ ಕೊರತೆಯ ಬಿಕ್ಕಟ್ಟನ್ನು ಉಪಶಮನ ಗೊಳಿಸಬೇಕಿತ್ತು ಎಂದರು. ಇದು 4,000 ಕಾರ್ಮಿಕರ ಬದುಕಿನ ಪ್ರಶ್ನೆಯಾಗಿರುವುದರಿಂದ ತಕ್ಷಣವೇ ಅಧಿಕಾರಿಗಳು‌ ಬಿಕ್ಕಟ್ಟು ಶಮನಗೊಳಿಸಬೇಕೆಂದು ಒತ್ತಾಯಿಸಿದರು.
ಟಿಕೆಎಂ ಕಂಪೆನಿಯ ಸಂವಹನ ಕೊರತೆ ಬಿಕ್ಕಟ್ಟಿನ ಬಗೆಗೆ ವಾಯ್ಸ್ ಆಫ್ ವರ್ಕರ್ಸ್ ಕಾರ್ಮಿಕ ಆಯುಕ್ತರ ಕಚೇರಿಯ ಅಧಿಕಾರಿಗಳ ಗಮನಕ್ಕೆ ತಂದಾಗ, ಈ ಬಗೆಗೆ ಮಾಹಿತಿ ಇಲ್ಲವೆಂದು ಅಧಿಕಾರಿಗಳು ಸ್ಪಷ್ಟಪಡಿಸಿದರು.