Take a fresh look at your lifestyle.

ವಿಸ್ಟ್ರಾನ್ ಘರ್ಷಣೆಗೆ ಗಂಭೀರವಾದ ಕಾರಣಗಳಿಲ್ಲ

ಕಂಪನಿ ಶೀಘ್ರದಲ್ಲೇ ಅದೇ ಘಟಕದಲ್ಲಿ ಕಾರ್ಯಾಚರಣೆಯನ್ನು ಮುಂದುವರೆಸಲಿದೆ

0
post ad

ಬೆಂಗಳೂರು: ವಿಸ್ಟ್ರಾನ್‌ ಕಂಪನಿಯಲ್ಲಿ ನಡೆದ ಘರ್ಷಣೆಗೆ ಸಣ್ಣಪುಟ್ಟ ಸಮಸ್ಯೆಗಳೇ ಕಾರಣವಂತೆ, ಅದಕ್ಕೆ  ಗಂಭೀರವಾಗಿ ಪರಿಗಣಿಸಬಹುದಾದ ಕಾರಣಗಳಿಲ್ಲ ಎಂಬ ಮಾಹಿತಿ ಹೊರಬಿದ್ದಿದೆ.
ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದ್ದ ದಾಂದಲೆಗೆ ಸಂಬಂಧಿಸಿದಂತೆ ಕಾರ್ಮಿಕರಿಗೆ ವೇತನ ಪಾವತಿ, ಕಾರ್ಮಿಕ ಪರವಾನಗಿ ಸೇರಿದಂತೆ ಹಲವು ವಿಷಯಗಳ ವಿಚಾರಣೆ ಭಾಗವಾಗಿ ಕಾರ್ಮಿಕ ಆಯುಕ್ತರಿಗೆ ವಿಸ್ಟ್ರಾನ್ ಕಂಪನಿಯ ಪ್ರತಿನಿಧಿಗಳು ಮಾಹಿತಿ ನೀಡಿದ್ದಾರೆ.
ಕಂಪನಿಯಲ್ಲಿ ಪ್ರತಿ ತಿಂಗಳು 7 ನೇ ತಾರೀಖಿನಂದು ಸಂಬಳ ಆಗುತ್ತಿತ್ತು. ಒಂದೆರಡು ತಿಂಗಳಿಂದ 11 ನೇ ತಾರೀಖಿಗೆ ಕೊಟ್ಟಿದ್ದಾರೆ. ಮೂರರಿಂದ ನಾಲ್ಕು ದಿನಗಳಷ್ಟು ತಡವಾಗುತ್ತಿತ್ತು. ಓವರ್‌ ಟೈಂ ಕೆಲಸದ ವೇತನ ಕೊಡಬೇಕಾಗಿತ್ತು ಎಂದು ಮಾಹಿತಿ ಹೊರಬಿದ್ದಿದೆ. ಅದರ ಬಗೆಗೆ ಕಾರ್ಮಿಕ ಅಧಿಕಾರಿಗಳು ಪರಿಶೀಲನೆ ನಡೆಸಲಿದ್ದಾರೆ. ವಸ್ತುಸ್ಥಿತಿ ಮತ್ತು ನೈಜ ಅಂಶಗಳ ಬಗೆಗೆ ಕಾರ್ಮಿಕ ಇಲಾಖೆಯ ಅಧಿಕಾರಿಗಳು ಪರಿಶೀಲನೆ ನಡೆಸಿದ ನಂತರ ಮೂಲ ಕಾರಣ ಗೊತ್ತಾಗಲಿದೆ.
ಅಲ್ಲದೆ, ಕಳೆದ ಎರಡು ತಿಂಗಳಿಂದ ಒಂದೆರಡು ದಿನಗಳ ಸಂಬಳ ಕಡಿತ ಆಗಿತ್ತು. ಇದಕ್ಕೆ ಸಾಫ್ಟ್‌ವೇರ್‌ ಸಮಸ್ಯೆಯೇ ಕಾರಣ ಆಗಿತ್ತು. ಅದನ್ನು ಸರಿಪಡಿಸಲು ನಾಲ್ಕೈದು ದಿನಗಳ ತಡವಾಗಿತ್ತು. ಆ ಬಳಿಕ ಸರಿಯಾಗುತ್ತಿತ್ತು ಎನ್ನಲಾಗಿದೆ.
ಕಡಿತ ಆಗಿರುವ ವೇತನದ ಬಾಕಿಯನ್ನೂ ಕೊಟ್ಟಿದ್ದಾರೆ. ಈ ತಿಂಗಳದ್ದು ಕೊಟ್ಟಿರಲಿಲ್ಲ. ಅದನ್ನು ಹೊರತು ಪಡಿಸಿದರೆ ಒಟ್ಟಾರೆ ಸಂಬಳ ಪಾವತಿ ಬಾಕಿ ಉಳಿಸಿಕೊಂಡಿಲ್ಲ. ವೇತನ ಪಾವತಿಯ ಮಾಹಿತಿಯನ್ನೂ ಕೇಳಿದ್ದೇವೆ. ಇತರ ಯಾವುದೇ  ಮಹತ್ವದ ಕಾರಣಗಳು ಇಲ್ಲದಿದ್ದರೂ ಇದ್ದಕ್ಕಿದ್ದಂತೆ ಗಲಭೆ ಭುಗಿಲೆದ್ದಿದೆ. ದೋಂಬಿಗೆ ಮಾಲೀಕರ ಕಡೆಯಿಂದ ಯಾವುದೇ ಕಾರಣ ಗೋಚರವಾಗಿಲ್ಲ ಎಂದು ಕಾರ್ಮಿಕ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಒಟ್ಟಾರೆ, ದೋಂಬಿಗೆ ಸಣ್ಣಪುಟ್ಟ ಸಮಸ್ಯೆಗಳೇ ಕಾರಣವಾಗಿದ್ದು, ಗಂಭೀರವಾದ ಕಾರಣಗಳು ಕಾರ್ಮಿಕ ಇಲಾಖೆಗೆ ಲಭ್ಯವಾಗಿಲ್ಲ.
ಕಾರ್ಮಿಕ ಇಲಾಖೆಯು ಗುತ್ತಿಗೆ ಪರವಾನಗಿಗಳನ್ನು ನೀಡಿ, ಅವುಗಳನ್ನು ಪರಿಶೀಲಿಸಲು ಕಾರ್ಮಿಕ ಇಲಾಖೆಗಳು ವಿಫಲವಾಗುತ್ತಿರುವುದು ಇಂತಹ ಘಟನೆಗಳು ನಡೆಯಲು ಕಾರಣ ಎನ್ನುವ ಮಾತುಗಳು ಕೇಳಿಬರುತ್ತಿವೆ.
ಇನ್ನು, ಕಂಪನಿ ಸ್ಥಳಾಂತರದ ಬಗೆಗೆ ಹುಟ್ಟಿಕೊಂಡಿದ್ದ ಊಹಾಪೋಹಾಗಳಿಗೆ ತೆರೆಬಿದ್ದಿದ್ದು, ನವೀಕರಣ ಕಾರ್ಯ ಮುಗಿದ ತಕ್ಷಣವೇ ಕಂಪನಿ ಅದೇ ಘಟಕದಲ್ಲಿ ಕಾರ್ಯಾಚರಣೆಯನ್ನು ಮುಂದುವರೆಸುವ ಬಗೆಗೂ ಕಂಪನಿ ಆಡಳಿತ ಮಂಡಳಿ ಕಾರ್ಮಿಕ ಇಲಾಖೆಗೆ ಮಾಹಿತಿಯನ್ನು ನೀಡಿದೆ.