Take a fresh look at your lifestyle.

ಟೊಯೋಟಾ ಕಿರ್ಲೋಸ್ಕರ್‌ ಕಾರ್ಮಿಕರಿಂದ ಅಹೋರಾತ್ರಿ ಧರಣಿ

ಕಾರ್ಮಿಕರಿಂದ ಆಡಳಿತ ವರ್ಗ ಮಿತಿ ಮೀರಿದ ಕೆಲಸವನ್ನು ನಿರೀಕ್ಷೆ ಮಾಡುತ್ತಿದ್ದು,ಮಾಡಲು ಆಗದಿದ್ದರೆ ನೋಟಿಸ್‌ ಕೊಡುವುದು, ಪ್ರಶ್ನಿಸುವವರನ್ನು ಕೆಲಸದಿಂದ ಸಸ್ಪೆಂಡ್‌ ಮಾಡುವ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎನ್ನಲಾಗುತ್ತಿದೆ

0
post ad

ರಾಮನಗರ: ಕಾರ್ಮಿಕ ಸಂಘದ ಪದಾಧಿಕಾರಿಯನ್ನು ವಿನಾಕಾರಣ ನೌಕರಿಯಿಂದ ಅಮಾನತು ಮಾಡಿರುವುದನ್ನು ಖಂಡಿಸಿ ಹಾಗೂ ಅಧಿಕ ಕಾರ್ಯಭಾರದ ಒತ್ತಡವನ್ನು ತಡೆಯುವಂತೆ ಒತ್ತಾಯಿಸಿ ಟೊಯೋಟಾ ಕಿರ್ಲೋಸ್ಕರ್‌ ಮೋಟಾರ್ಸ್‌ ಕಂಪೆನಿಯ ಕಾರ್ಮಿಕರು ಅಹೋರಾತ್ರಿ ಧರಣಿ ಪ್ರತಿಭಟನೆ ನಡೆಸಿದ್ದಾರೆ.
ಬಿಡದಿಯ ಟೊಯೋಟಾ ಕಿರ್ಲೋಸ್ಕರ್‌ ಕಂಪೆನಿಯು ಕಾರ್ಮಿಕ ಸಂಘದ ಪದಾಧಿಕಾರಿಯೊಬ್ಬರನ್ನು ವಿನಾಕಾರಣ ಕೆಲಸದಿಂದ ಅಮಾನತು ಮಾಡಿತ್ತು.
ಅಲ್ಲದೆ ಕಂಪೆನಿಯ ಆಡಳಿತ ಮಂಡಳಿ ಕಾರ್ಮಿಕರನ್ನು ತೀರಾ ಅಮಾನವೀಯವಾಗಿ ನಡೆಸಿಕೊಳ್ಳುವ ಜೊತೆಗೆ ಕ್ಷಣಕಾಲವೂ ಪುರುಸೊತ್ತು ನೀಡದಂತೆ ಕೆಲಸ ನಿರ್ವಹಣೆ ಮಾಡಬೇಕಾದ ಅನಿವಾರ್ಯತೆ ತಂದೊಡ್ಡಿದೆ. ಇದನ್ನು ಪ್ರಶ್ನಿಸಲು ಹೋದ ಕಾರ್ಮಿಕ ಸಂಘದ ಪದಾಧಿಕಾರಿಗಳೊಂದಿಗೆ ಕಂಪೆನಿಯ ಆಡಳಿತ ಮಂಡಳಿ ಅಧಿಕಾರಿಗಳು ಉಡಾಫೆಯಿಂದ ನಡೆದುಕೊಂಡಿದ್ದಾರೆ ಎಂದು ಕಾರ್ಮಿಕರು ಕೆಲಸದಿಂದ ದೂರ ಉಳಿದು ಅಹೋರಾತ್ರಿ ಧರಣಿ ನಡೆಸಿದ್ದಾರೆ.
ಕೂಡಲೇ ನೌಕರನ ಅಮಾನತು ಆದೇಶವನ್ನು ವಾಪಸ್‌ ಪಡೆಯಬೇಕು. ಹಾಗೂ ಹೆಚ್ಚಿನ ಕಾರ್ಯದೊತ್ತಡವನ್ನು ನಿಯಂತ್ರಣಕ್ಕೆ ತರಬೇಕು, ಕಾರ್ಮಿಕರನ್ನು ಮಾನವೀಯತೆಯಿಂದ ಕಾಣಬೇಕು ಬೇಡಿಕೆಯನ್ನು ಈಡೇರಿಸುವಂತೆ ಆಗ್ರಹಿಸಿ ಸುಮಾರು ಮೂರೂವರೆ ಸಾವಿರಕ್ಕೂ ಅಧಿಕ ಕಾರ್ಯನಿರತ ಉದ್ಯೋಗಿಗಳು ಕಂಪೆನಿಯ ಆವರಣದಲ್ಲಿ ಹಾಗೂ ಹೊರ ಭಾಗದಲ್ಲಿ ಅನಿರ್ಧಿಷ್ಟಾವಧಿಗೆ ಸಾಮೂಹಿಕ ಮುಷ್ಕರ ಆರಂಭಿಸಿದ್ದಾರೆ.


ಈ ಕುರಿತು ಟಿಕೆಎಂ ಕಾರ್ಮಿಕ ಸಂಘದ ಅಧ್ಯಕ್ಷ ಪ್ರಸನ್ನಕುಮಾರ್‌ ಚಕ್ಕೆರೆ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಅದರಲ್ಲೂ
ಕೋವಿಡ್‌ ನಂತರದ ದಿನಗಳಲ್ಲಿ ಕಂಪೆನಿಯ ಆಡಳಿತ ಮಂಡಳಿ ಕೋವಿಡ್‌ ಮಾರ್ಗಸೂಚಿ ಹೆಸರಿನಲ್ಲಿ ಕಿರುಕುಳ ಆರಂಭವಾಗಿದ್ದು ಕಾರ್ಮಿಕರನ್ನು ತೀರಾ ಅಮಾನವೀಯವಾಗಿ ಕಾಣಲಾಗುತ್ತದೆ. ಉತ್ಪಾದನೆಗೆ ತೊಂದರೆಯಾಗದಂತೆ ಮಿಲಿ ಸೆಕೆಂಡ್‌ ನಲ್ಲಿ ಕಾರ್ಮಿಕರಿಂದ ಮಿತಿ ಮೀರಿ ಕೆಲಸ ನಿರೀಕ್ಷೆ ಮಾಡುತ್ತಿದ್ದು,
ಮಾಡಲಾಗದಿದ್ದರೆ ನೋಟಿಸ್‌ ಕೊಡುವುದು, ಪ್ರಶ್ನಿಸುವವರನ್ನು ಕೆಲಸದಿಂದ ಸಸ್ಪೆಂಡ್‌ ಮಾಡುವ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ದೂರಿದರು.
ಕಾರ್ಮಿಕರ ಹಕ್ಕುಗಳನ್ನು ಗಾಳಿಗೆ ತೂರಿರುವ ಆಡಳಿತ ಮಂಡಳಿ ಸರಕಾರದ ಮಾರ್ಗಸೂಚಿಯನ್ನು ಸತತ ಉಲ್ಲಂಘಿಸುತ್ತಾ ಕಾರ್ಮಿಕರ ಜೀವದ ಜೊತೆ ಚಲ್ಲಾಟವಾಡುತ್ತಿದೆ. ಶೌಚಾಲಯಕ್ಕೆ ಹೋಗಲು ಸಹ ಅವಕಾಶ ನೀಡದೆ ಕೆಲಸ ತೆಗೆದುಕೊಳ್ಳಲಾಗುತ್ತಿದೆ. ಭಾರತ ಸರಕಾರದ ಕಾನೂನುಗಳನ್ನು ಉಲ್ಲಂಘಿಸುವ ಜೊತೆಗೆ ಭಾರತೀಯರ ಮೂಲಭೂತ ಹಕ್ಕುಗಳನ್ನು ಕಿತ್ತುಕೊಳ್ಳಲು ಟೊಯೋಟಾ ಕಿರ್ಲೋಸ್ಕರ್‌ ಮೋಟಾರ್ಸ್‌ ಆಡಳಿತ ಮಂಡಳಿ ಅಧಿಕಾರಿಗಳು ಮುಂದಾಗಿದ್ದಾರೆ ಎಂದು ಆರೋಪಿಸಿದರು.
ಕಾರ್ಮಿಕರ ಮೇಲೆ ನಡೆಸುತ್ತಿರುವ ಶೋಷಣೆ ಕುರಿತು ಜಿಲ್ಲಾಧಿಕಾರಿಗಳು, ಸಚಿವರು ಹಾಗೂ ಮುಖ್ಯಮಂತ್ರಿಗಳಿಗೂ ಮನವಿ ನೀಡಲಾಗಿದೆ. ಆದರೆ.
ಕಂಪೆನಿಯು ವಾಸ್ತವ ಸ್ಥಿತಿಯನ್ನು ಮರೆಮಾಚುತ್ತಿದ್ದು ಹೊರಗೊಂದು ಮತ್ತು ಒಳಗೊಂಡು ದ್ವಂದ್ವ ನೀತಿಯನ್ನು ಅನುಸರಿಸುತ್ತಿದೆ. ಟಿಕೆಎಂ ಆಡಳಿತ ಮಂಡಳಿಯಿಂದ ಮುಂದಿನ ದಿನಗಳಲ್ಲಿ ಕಾರ್ಮಿಕರಿಗೆ ಆಗಬಹುದಾದ ಅಪಾಯವನ್ನು ತಡೆಯಲು ಸರಕಾರ ಮಧ್ಯೆ ಪ್ರವೇಶಿಸಬೇಕು ಎಂದು ಅವರು ಆಗ್ರಹಿಸಿದರು. ಈ ನಡುವೆ ಆಡಳಿತ ಮಂಡಳಿ ಕಂಪನಿಯನ್ನು ಅನಿರ್ದಿಷ್ಟಾವಧಿಗೆ ಲಾಕ್ ಔಟ್ ಮಾಡಿ ಆದೇಶ ಹೊರಡಿಸಿರುವುದು ಗೊತ್ತೆ ಇದೆ.