Take a fresh look at your lifestyle.

ಇನ್ಮುಂದೆ ಕಾರ್ಮಿಕನ ದುರ್ನಡತೆಗಳು ಯಾವುವು ಗೊತ್ತಾ

ಕರ್ತವ್ಯದಲ್ಲಿರುವಾಗ ನಿದ್ದೆ ಮಾಡುವುದು ದುರ್ನಡತೆಯೇ ಆಗಿದೆ. ಮೇಲಧಿಕಾರಿ ಅಥವಾ ಸಹೋದ್ಯೋಗಿಗೆ ಬೆದರಿಕೆ, ಬೈಗಳು, ಹಲ್ಲೆ ಮಾಡುವುದು ದುರ್ನಡತೆ. ವ್ಯವಹಾರ ಮುಗಿದ ನಂತರ ಕಚೇರಿಯ ನೆಟ್ ವರ್ಕ್ ಅನ್ನು ಬಳಸುವುದೂ ಸಹ ದುರ್ನಡತೆಯೇ ಆಗಿದೆ

0
post ad

ನವದೆಹಲಿ : ಕೇಂದ್ರ ಕಾರ್ಮಿಕ ಸಚಿವಾಲಯ ಕೈಗಾರಿಕೆಗಳಲ್ಲಿ ಕಾರ್ಮಿಕನು ಮಾಡಬಾರದಾದ ಅಂಶಗಳನ್ನು ನೂತನ ಸಂಹಿತೆಯಲ್ಲಿ ವಿವರಿಸಿದೆ. ಒಂದು ವೇಳೆ ತಾನು ವಿವರಿಸಿರುವ ಕೆಲಸಗಳನ್ನು ಕಾರ್ಮಿಕ ಮಾಡಿದ್ದೇ ಆದರೆ ಅದನ್ನು ಕಾರ್ಮಿಕನ ದುರ್ನಡತೆ ಎಂದೇ ಭಾವಿಸಲಾಗುತ್ತದೆ. ಹನ್ನೆರಡು ತಿಂಗಳ ಅವಧಿಯಲ್ಲಿ ಮೂರು ಅಥವಾ ಅದಕ್ಕಿಂತ ಹೆಚ್ಚಿನ ಬಾರಿ ಯಾವುದೇ ದುರ್ನಡತೆಯ ಆಧಾರದಲ್ಲಿ ಕಾರ್ಮಿಕನು ತಪ್ಪಿತಸ್ಥನೆಂದು ಸಾಬೀತಾದರೆ, ಅವನ ವಿರುದ್ಧ ಶಿಸ್ತಿನ ಕ್ರಮಕ್ಕೆ ಸಂಹಿತೆ ಅನುವು ಮಾಡಿಕೊಟ್ಟಿದೆ.
ಕೈಗಾರಿಕಾ ಸಂಬಂಧಗಳ ಸಂಹಿತೆ 2020ರ ಸೆಕ್ಷನ್ 29ರ ಅನ್ವಯ ಕೇಂದ್ರ ಕಾರ್ಮಿಕ ಇಲಾಖೆ ಉತ್ಪಾದನೆ, ಗಣಿಗಾರಿಕೆ ಮತ್ತು ಸೇವಾ ವಲಯಗಳಿಗಾಗಿ ಕರಡು ಮಾದರಿ ಸ್ಟ್ಯಾಂಡಿಂಗ್ ಗಳ ಅಧಿಸೂಚನೆ ಹೊರಡಿಸಿದೆ.
ನೌಕರನ 23 ವ್ಯವಹಾರಗಳ ಬಗೆಗೆ ಪ್ರಸ್ತಾಪಿಸಿರುವ ಕೈಗಾರಿಕಾ ಸಂಬಂಧಗಳ ಸಂಹಿತೆ ಈ ಬಗೆಗೆ ಕರಡು ಮಾದರಿ ಸ್ಥಾಯೀ ಆದೇಶಗಳನ್ನು ಹೊರಡಿಸಿದೆ. ಈ ಬಗೆಗೆ ಸಲಹೆ/ಆಕ್ಷೇಪಣೆಗಳನ್ನು ಆಹ್ವಾನಿಸಿದೆ.
90 ದಿನಗಳ ಒಳಗೆ ಸಲಹೆ, ಸೂಚನೆ, ಆಕ್ಷೇಪಣೆಗಳಿದ್ದರೆ ತಿಳಿಸಿ ಎಂದು ಅದು ಪಾಲುದಾರರಿಗೆ ಕರೆ ನೀಡಿದೆ. ಸೇವಾ ವಲಯದ ವಿಶೇಷ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಕಾರ್ಮಿಕ ಸಚಿವಾಲಯ ವಿಶೇಷ ಮಾದರಿ ಆದೇಶ ಹೊರಡಿಸಿದೆ.
ಈ ಮಾದರಿ ನಿಯಮಗಳ ಪ್ರಕಾರ ಉದ್ಯೋಗಿಯ ವರ್ತನೆಯು ಸರಿಯಾಗಿಲ್ಲದಿದ್ದರೆ, ಅಥವಾ ವಿಚಾರಣೆ ಬಾಕಿ ಇರುವಾಗಲೇ ಅವನನ್ನು ಅಮಾನತು ಮಾಡಲು ಅವಕಾಶವಿದೆ.
ಉದ್ಯೋಗಿಯ ದುರ್ನಡತೆಯ ಮೇಲಿನ ನಿಯಮಗಳು ತಯಾರಿಕೆ ಮತ್ತು ಸೇವಾ ವಲಯಗಳಿಗೆ ಸಮಾನವಾಗಿರುತ್ತವೆ.
ಕಾರ್ಮಿಕನ ದುರ್ನಡತೆಯ ಅಡಿ ಬರುವ ಅಂಶಗಳು :
* ಕಳ್ಳತನ, ವಂಚನೆ, ಕರ್ತವ್ಯದಲ್ಲಿ ಭ್ರಷ್ಟಾಚಾರ
* ಸ್ವಂತ ಲಾಭಕ್ಕಾಗಿ ಲಂಚವನ್ನು ನೀಡುವುದು, ತೆಗೆದುಕೊಳ್ಳುವುದು.
* ವ್ಯಕ್ತಿ ಅಥವಾ ಇತರರೊಂದಿಗೆ ಸೇರಿ ಉದ್ದೇಶಪೂರ್ವಕವಾಗಿ ಬಂಡಾಯ ಏಳುವುದು, ಹೇಳಿದ ಮಾತು ಕೇಳದಿರುವುದು ಮತ್ತು ಮೇಲಧಿಕಾರಿಗಳು ಲಿಖಿತವಾಗಿ ಜಾರಿಗೊಳಿಸಿದ ಕಾನೂನು ಆದೇಶಗಳನ್ನು ಪಾಲಿಸದೆ ಇರುವುದು.
* ಕೆಲಸಕ್ಕೆ ವಿಳಂಬವಾಗಿ ಹಾಜರಿಯಾಗುವುದನ್ನು ಹವ್ಯಾಸವನ್ನಾಗಿಸುವುದು, ಪೂರ್ವಾನುಮತಿ ರಜೆ ಇಲ್ಲದೆ, ಸೂಕ್ತ ಕಾರಣವಿಲ್ಲದೆ ಪದೇ ಪದೇ ಗೈರು ಹಾಜರಿಯಾಗುವುದು.
* ಕರ್ತವ್ಯದಲ್ಲಿರುವಾಗ ಮದ್ಯ ಸೇವನೆ, ಜಗಳವಾಡುವುದು, ಗಲಾಟೆ ಮಾಡುವುದು, ಕೆಲಸದ ಸ್ಥಳದಲ್ಲಿ ಅಸಭ್ಯ ವರ್ತನೆ, ಅಮರ್ಯಾದೆಯಾಗಿ ನಡೆದುಕೊಳ್ಳುವುದು..
* ಕರ್ತವ್ಯನಿರ್ವಹಣೆಯಲ್ಲಿ ನಿರ್ಲಕ್ಷ್ಯವನ್ನು ಅಭ್ಯಾಸವನ್ನಾಗಿ ಮಾಡಿಕೊಳ್ಳುವುದು.
* ಮಾಲೀಕರ ಆಸ್ತಿಗೆ ಮತ್ತು ನಡೆಯುತ್ತಿರುವ ಕಾಮಗಾರಿಗೂ ಉದ್ದೇಶಪೂರ್ವಕವಾಗಿ ಹಾನಿ ಮಾಡುವುದು.
* ಕರ್ತವ್ಯದಲ್ಲಿ ನಿದ್ದೆ ಮಾಡುವುದು.
* ಅನಾರೋಗ್ಯ ಪೀಡಿತರಂತೆ ನಟಿಸುವುದು ಮತ್ತು ಕೆಲಸವನ್ನು ನಿಧಾನಗೊಳಿಸುವುದು.
* ಕೆಳಹಂತದ ನೌಕರರಿಂದ ಉಡುಗೊರೆಗಳನ್ನು ಸ್ವೀಕರಿಸುವುದು.
* ನೈತಿಕ ನಡವಳಿಕೆಗೆ ಸಂಬಂಧಿಸಿದ ಅಪರಾಧ ಪ್ರಕರಣಗಳಲ್ಲಿ ನ್ಯಾಯಾಲಯಗಳಿಂದ ಶಿಕ್ಷೆಗೆ ಗುರಿಯಾಗುವುದು.
* ಪೂರ್ವಾನುಮತಿ ಮತ್ತು ಬಲವಾದ ಕಾರಣಗಳು ಇಲ್ಲದೆ ಸತತ 10 ದಿನಗಳಿಗಿಂತ ಹೆಚ್ಚು ಕಾಲ ಗೈರು ಹಾಜರಾಗುವುದು.
* ಕೆಲಸಕ್ಕೆ ಸೇರುವಾಗ ಹೆಸರು, ವಯಸ್ಸು, ತಂದೆಯ ಹೆಸರು, ವಿದ್ಯಾರ್ಹತೆ, ಹಿಂದಿನ ಅನುಭವ ಇತ್ಯಾದಿ ಗಳ ಬಗ್ಗೆ ತಪ್ಪು ಮಾಹಿತಿ ನೀಡುವುದು.
* ಪೂರ್ವಾನುಮತಿ ಮತ್ತು ಸೂಕ್ತ ಕಾರಣವಿಲ್ಲದೆ ಕೆಲಸವನ್ನು ಬಿಟ್ಟು ಬಿಡುವುದು.
* ಮೇಲಧಿಕಾರಿ ಮತ್ತು ಸಹೋದ್ಯೋಗಿಗೆ ಬೆದರಿಕೆ, ಬೈಗಳು, ಹಲ್ಲೆ ಮಾಡುವುದು.
* ಹಿಂಸೆಯನ್ನು ಪ್ರಚೋದಿಸುವ ಉಪನ್ಯಾಸಗಳನ್ನು ನೀಡುವುದು
* ಮೇಲೆ ಸೂಚಿಸಿದ ದುರ್ನಡತೆಗಳು ಮಾಡುವಂತೆ ಪ್ರಚೋದಿಸುವುದು ಅಥವಾ ಪ್ರಚೋದಿಸಲು ಪ್ರಯತ್ನಿಸುವುದು.
* 14 ದಿನಗಳ ಮುಂಚಿತವಾಗಿ ಸೂಚನೆ ನೀಡದೆ ಕಾರ್ಮಿಕನಾಗಲೀ ಅಥವಾ ಸಹೋದ್ಯೋಗಿಗಳೊಂದಿಗೆ ಕಾನೂನುಬಾಹಿರವಾದ ಮುಷ್ಕರವನ್ನು ಆರಂಭಿಸುವುದು.
* ಅನಧಿಕೃತ ವ್ಯಕ್ತಿಗಳಿಗೆ ಸಂಸ್ಥೆಯ ಗೌಪ್ಯ ಮಾಹಿತಿಯನ್ನು ತಿಳಿಸುವುದು.
* ಲಿಖಿತ ಪೂರ್ವಕ ಆರೋಪ ಪಟ್ಟಿ, ಆದೇಶ, ನೋಟಿಸ್ ಗಳನ್ನು ಸ್ವೀಕರಿಸದಿರುವುದು.
* ಮಾಲೀಕ ನೀಡಿದ ಸುರಕ್ಷತಾ ಸಾಧನಗಳನ್ನು ಧರಿಸದಿರುವುದು ಮತ್ತು ಅವುಗಳನ್ನು ತಿರಸ್ಕರಿಸುವುದು.
* ಮರುಪಾವತಿಗಳಿಗೆ ನಕಲಿ ಬಿಲ್ಲುಗಳನ್ನು ನೀಡುವುದು.